Adhishakthyathmaka Sri Annapoorneshwari Ammanavara Temple, SriKshetra Horanadu - 577 181, Chickmagalore

 

ಶ್ರೀಕ್ಷೇತ್ರ ಹೊರನಾಡಿನ ಒಳ ಅನುಭವ

chinamaya writter 1
ಕಣ್ಣಳತೆಯ ಸುತ್ತಲೂ ಕಣ್ಣು ಹಾಯಿಸಿದಷ್ಟೂ ಪೂರ್ಣವೃತ್ತಾಕಾರದಲ್ಲಿ ದಿಟ್ಟವಾಗಿ ಎದ್ದು ನಿಂತ ಗುಡ್ಡ ಬೆಟ್ಟಗಳಲ್ಲಿ ದಟ್ಟವಾದ ಕಾಡು. ಕಾನನದ ಬೃಹತ್ ಕೋಟೆಯೊಳಗೆ ನಾವಿರುವ ಅನುಭವ. ಅಲ್ಲಿ ನಡೆದಾಡುತ್ತಲೇ ಮರೆತು ಹೋಗಿರುತ್ತದೆ ಭವ.ಅದೇ ಅಲ್ಲಿಯ ಮಹಾತ್ಮೆ ವೈಭವ. ತನುಮನದ ಕಣಕಣದಲ್ಲೂ ತಾನಾಗಿಯೇ ತುಂಬಿಕೊಳ್ಳುತ್ತದೆ ಭಕ್ತಿಭಾವ! ಹೌದು ನಮ್ಮ ನಾಡಿಗೆ ಕಳಶವಿಟ್ಟಂತೆ ಆ ಕ್ಷೇತ್ರ ‘ಹೊರನಾಡು’. ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿಯ ನೆಲೆಬೀಡು. ಆ ಕ್ಷೇತ್ರ ದರ್ಶನಮಾಡದವನ ಜನ್ಮವೇ ವ್ಯರ್ಥ, ಅಪೂರ್ಣ ಎಂದರೆ ತಪ್ಪಾಗಲಾರದು

ನಮ್ಮ ಭಾರತದ ಪುಣ್ಯಕ್ಷೇತ್ರಗಳೇ ಹಾಗೆ. ಸುಂದರ ಪ್ರಕೃತಿ ಇರುವಲ್ಲೇ ತೀರ್ಥಕ್ಷೇತ್ರಗಳು. ತೀರ್ಥಕ್ಷೇತ್ರಗಳು ಇರುವಲ್ಲೇ ಸುಂದರ ಪ್ರಕೃತಿ.ಆದರೆ ಭಕ್ತಜನಸಂದಣಿಯಿಂದ ಸುತ್ತಲಿನ ಪರಿಸರಕ್ಕೆ ಹಾನಿಯಾಗಿರುವುದು ಬಹುತೇಕ ತೀರ್ಥಕ್ಷೇತ್ರಗಳಲ್ಲಿ ಕಂಡುಬರುತ್ತದೆ.ಹೆಚ್ಚು ಹೆಚ್ಚು ಯಾತ್ರಾರ್ಥಿಗಳು ತಮ್ಮ ಕ್ಷೇತ್ರಕ್ಕೆ ದರ್ಶನ ನೀಡಲಿ, ಆ ಮೂಲಕ ಕ್ಷೇತ್ರದ ಅಭಿವೃದ್ಧಿ(ಮುಖ್ಯವಾಗಿ ಆರ್ಥಿಕ ಅಭಿವೃದ್ಧಿ!) ಆಗಲಿ ಎಂದು ದೇವಾಲಯದ ಆಡಳಿತ ಮಂಡಳಿಗಳೂ ಕೂಡ ಸುದ್ದಿವಾಹಿನಿಗಳ ಮೂಲಕ ಹುಚ್ಚು ಪ್ರಚಾರಕ್ಕೆ ಬಿದ್ದಿರುವುದು ಆಯಾ ಕ್ಷೇತ್ರದ ದೇವರುಗಳಿಗೂ ಇಷ್ಟವಿರಲಿಕ್ಕಿಲ್ಲ.

ಹೀಗೂ ಉಂಟೆಂದು ಅತಿರಂಜಿತ ವಿಶೇಷ ಕಾರ್ಯಕ್ರಮಗಳನ್ನು ಅತಿರಂಜಿತವಾಗಿ ಪ್ರಸಾರ ಮಾಡಿ ಆ ಮೂಲಕ ಕೆಲವು ವಾಹಿನಿಗಳು ತಮ್ಮ ಟಿ.ಆರ್.ಪಿ ಹೆಚ್ಚಿಸಿಕೊಂಡು ಭಕ್ತಾದಿಗಳ ದಿಕ್ಕುದಾರಿ ತಪ್ಪಿಸುತ್ತಿರುವುದಂತೂ ಇನ್ನೂ ಅಪಾಯಕಾರಿ.ತಮ್ಮ ಇಷ್ಟಾರ್ಥಗಳು ಬೇಡಿದ ಕೂಡಲೇ ಇಡೇರಬೇಕೆಂಬ ವಿಚಿತ್ರ ಮನೋಭಾವ ಭಕ್ತರ ಮನದಲ್ಲಿ ನೆಲೆಯೂರುವಂತಹ ಮನೋಸ್ಥಿತಿಯನ್ನು ತಂದಿಟ್ಟ ಈ ವಾಹಿನಿಗಳ ದುಸ್ಥಿತಿಗೆ ಏನನ್ನಬೇಕೆಂದು ಆ ದೇವರಿಗೂ ತಿಳಿದಂತಿಲ್ಲ. ಅಂತವರು ಭಕ್ತರೇ ಅಲ್ಲ, ದೇವರೊಡನೆ ವ್ಯವಹಾರಕ್ಕೆ ಇಳಿಯುವವರು, ಇಷ್ಟು ಬಂದರೆ ನಿನಗಿಷ್ಟು ಕಾಣಿಕೆ ಎಂಬಂತೆ ದೇವರಿಗೇ ಕಮೀಷನ್ ಆಸೆ ತೋರಿಸಿ ಬೇಡಿಕೆ ಸಲ್ಲಿಸುವವರು?! ಅದೇನೆ ಇರಲಿ…

ಈ ಹೊರಜಗತ್ತಿನ ಅತಿರಂಜಿತ ಪ್ರಚಾರದಿಂದ ಹೊರಗುಳಿದು ತನ್ನದೇ ಆದ ನೈಜಸೊಬಗನ್ನೂ,ಚೆಲುವನ್ನೂ ಇಂದಿಗೂ ಹಾಗೆಯೇ ಉಳಿಸಿಕೊಂಡಿರುವ ಕೆಲವೇ ಕೆಲವು ಕ್ಷೇತ್ರಗಳಲ್ಲಿ ‘ಶ್ರೀಕ್ಷೇತ್ರ ಹೊರನಾಡು’ ಎಂದರೆ ಅದು ಅತಿಶಯೋಕ್ತಿಯೇನಲ್ಲ.ಅದಕ್ಕೆ ಕಾರಣ ಆ ಶಕ್ತಿಕ್ಷೇತ್ರವನ್ನು ಮುನ್ನಡೆಸುತ್ತಿರುವ ಆ ಒಬ್ಬ ವಿಭಿನ್ನವ್ಯಕ್ತಿಯ ವಿಶೇಷ ಕರ್ತೃತ್ವಶಕ್ತಿ.ಈ ಕ್ಷೇತ್ರದಲ್ಲಿ ಅನ್ನಪೂರ್ಣೆಯು ಧರ್ಮದರ್ಶಿ ಶ್ರೀ ಭೀಮೇಶ್ವರ ಜೋಶಿ ಅವರ ಪಾಲಿಗೆ, ‘ಇಚ್ಛಾಶಕ್ತಿ ಜ್ನಾನಶಕ್ತಿ ಕ್ರಿಯಾಶಕ್ತಿ ಪ್ರದಾಯಿನಿ’ಆಗಿದ್ದಾಳೆ.

ಅಂದರೆ ಧರ್ಮದರ್ಶಿಗಳಿಗೆ ಇಲ್ಲಿ ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿ ಮಾಡಬೇಕೆಂಬ ಉತ್ಕಟವಾದ ಇಚ್ಛೆಯೂ ಇದೆ, ಅವರಲ್ಲಿ ಅದಕ್ಕೆ ಬೇಕಾದ ಜ್ನಾನವೂ ಇದೆ,ಅದನ್ನು ಆ ಕೂಡಲೆ ಕ್ರಿಯಾರೂಪಕ್ಕೆ ಇಳಿಸುವ ಹುಮ್ಮಸ್ಸು, ದೃಢ ಮನಸ್ಸೂ ಇದೆ ಹಾಗು ಈಗಾಗಲೇ ಅದನ್ನು ಕ್ರಿಯಾರೂಪಕ್ಕೆ ಇಳಿಸಿ ಬೇರೆ ಕ್ಷೇತ್ರಗಳಿಗೆ ಮಾದರಿಯಾಗಿದ್ದಾರೆ.

ಎಲ್ಲವೂ ದೈವೇಚ್ಛೆ ಎಂಬಂತೆ ಇಲ್ಲಿಯೂ ದೇವಿ ತನ್ನಿಚ್ಛೆಗೆ ಅನುಗುಣವಾಗಿ ಧರ್ಮದರ್ಶಿಗಳಿಗೆ ಹಾಗು ಅವರಿಗೆ ಸಹಕಾರ ನೀಡುತ್ತಿರುವ ಅವರ ಕುಟುಂಬದವರಿಗೆ ಜ್ನಾನ, ಕ್ರಿಯಾಶಕ್ತಿಯನ್ನು ಸಂಪೂರ್ಣವಾಗಿ ದಯಪಾಲಿಸಿದ್ದಾಳೆ ಎಂಬುದಕ್ಕೆ ಕ್ಷೇತ್ರದ ಸೌಂದರ್ಯವೇ ಸಾಕ್ಷಿ. ಸುಮಾರು ಹದಿನೈದು ವರುಷಗಳ ನಂತರ ಕ್ಷೇತ್ರಕ್ಕೆ ದರ್ಶನವನ್ನು ನೀಡುವ ಅನಿವಾರ್ಯ ಸಂದರ್ಭವೊದಗಿ ಬಂತು. ನಾನು ಧರ್ಮದರ್ಶಿಗಳ ಹತ್ತಿರದ ಸಂಬಂಧಿಯಾದರೂ ಅವರಿಗೆ ಅಂದು ದಿಡೀರ್ ಭೇಟಿ ನೀಡುವ ವಿಚಾರವನ್ನು ತಿಳಿಸಿರಲಿಲ್ಲ.

ಹಾಗೊಮ್ಮೆ ತಿಳಿಸಿದ್ದರೆ ದೇವಾಲಯಕ್ಕೆ ಅಂಟಿಕೊಂಡಂತಿರುವ ಅವರ ಮನೆಯಲ್ಲೇ ನನಗಾಗಿ ಅವರೊಡನೆ ಪ್ರತ್ಯೇಕ ಭೋಜನ,ವಸತಿ ವ್ಯವಸ್ಥೆ ಕಲ್ಪಿಸಿ ವಿಶೇಷವಾಗಿ ಉಪಚರಿಸುತ್ತಿದ್ದರು.ಆದರೆ ಎಲ್ಲರಂತೆ ನಾನೂ ಒಬ್ಬ ಸಾಮಾನ್ಯ ಭಕ್ತನಾಗಿ ಒಂದು ದಿನ ಕಳೆದು ಬಂದೆ. ಹದಿನೈದು ವರುಷದ ಹಿಂದೆ ಹೇಗಿತ್ತೋ ಹಾಗೇ ಇದೆ ಕ್ಷೇತ್ರ(ಅಂದರೆ ಸುತ್ತಲಿನ ಪರಿಸರ). ಆದರೆ ಮೂಲಸೌಕರ್ಯಗಳ ಅಭಿವೃದ್ಧಿ ಆಶ್ಚರ್ಯಕರವಾಗಿ ವೃದ್ಧಿಗೊಂಡಿದೆ.ಭಕ್ತಾದಿಗಳ ವಸತಿಗಾಗಿಯೇ ದೇವಸ್ಥಾನದ ಪಕ್ಕದಲ್ಲಿ ಆಡಳಿತ ಮಂಡಳಿಯಿಂದ ನಿರ್ಮಾಣಗೊಂಡ ಬಹುಮಹಡಿಯ ಬೃಹತ್ ಕಟ್ಟಡ ‘ಶ್ರೀ ಅನ್ನಪೂರ್ಣಾ ಭಕ್ತನಿವಾಸ’ ಸುಮಾರು 125 ಸಣ್ಣಕೋಣೆಗಳು ಹಾಗು 16 ದೊಡ್ಡಕೋಣೆಗಳಿಂದ ಕೂಡಿದ್ದು ಒಟ್ಟು 800 ಜನ ಯಾತ್ರಾರ್ಥಿಗಳು ಏಕಕಾಲಕ್ಕೆ ಉಳಿದುಕೊಳ್ಳಬಹುದಾಗಿದೆ. ಲಿಫ್ಟ್ ಕೂಡ ಹೊಂದಿರುವ ಇದನ್ನು ಯಾವುದೇ ಲಾಡ್ಜ್‌ಗಳಿಗೂ ಕಡಿಮೆ ಇಲ್ಲದಂತೆ ಆಧುನಿಕ ಶೈಲಿಯಲ್ಲಿ ನಿರ್ಮಿಸಲಾಗಿದೆ.

ಪ್ರತಿಯೊಂದು ಕೋಣೆಯಲ್ಲೂ ಪ್ರತ್ಯೇಕವಾಗಿ ನಿತ್ಯಕರ್ಮಕ್ಕೆ ವ್ಯವಸ್ಥೆ ಇದ್ದೂ, ಒಂದೆಡೆ ಬಿಸಿನೀರಿಗಾಗಿ ಸಾಮೂಹಿಕ ಸ್ನಾನದ ಕೋಣೆಗಳೂ ಇವೆ. ಇಲ್ಲಿ ಗಮನಿಸಬೇಕಾದ ಒಂದು ಸಂಗತಿಯೆಂದರೆ ನಮ್ಮ ನಾಡಿನ ಎಷ್ಟೊಂದು ದೊಡ್ಡ ದೊಡ್ಡ ಕ್ಷೇತ್ರಗಳಲ್ಲೂ ಸ್ನಾನ, ಶೌಚಾಲಯಗಳು ಕಳಪೆಯಾಗಿದ್ದು, ಸ್ವಚ್ಛತೆಯನ್ನೇ ಕಾಣದಾಗಿದೆ. ಭಕ್ತಾದಿಗಳಿಂದ ಸಂಗ್ರಹವಾದ ಅಪಾರ ಹಣವನ್ನು ಆಡಳಿತಮಂಡಳಿಯವರು ಏನು ಮಾಡುತ್ತಿರಬಹುದೆಂದು ನಮಗೇ ಅನುಮಾನ ಮೂಡಲಾರಂಭಿಸುತ್ತದೆ.

ನಮ್ಮ ಮನೆಯಲ್ಲೇ ಸ್ವಚ್ಛತೆಯನ್ನು ಬಯಸುವ ನಾವು ಪುಣ್ಯಕ್ಷೇತ್ರಗಳಲ್ಲಿ ಅದನ್ನು ಇನ್ನೂ ಹೆಚ್ಚು ನಿರೀಕ್ಷಿಸುತ್ತೇವೆ. ನಿರೀಕ್ಷೆ ಹುಸಿಯಾದಾಗ ಸಹಜವಾಗಿ ಬೇಸರವಾಗುತ್ತದೆ. ಆದರೂ ಇದು “ದೈವಸನ್ನಿಧಿ”ಯೆಂದು ನಾವು ಯಾರನ್ನೂ ನಿಂದಿಸದೆ ಹೊಂದಾಣಿಕೆ ಮಾಡಿಕೊಂಡು ಹೋಗಬೇಕೆಂದು ವಿರೋಧಿಮನೋಭಾವದಿಂದ ಹಿಂದೆಸರಿದು ಸುಮ್ಮನಾಗಿಬಿಡುತ್ತೇವೆ. ಅಂತರಂಗಕ್ಕೆ ಸೀಮಿತವಾಗುವ ಕೋಪ ದೇವರ ದರ್ಶನದಿಂದ ಶಾಂತವಾಗಿ ಬಿಡುತ್ತದೆ.ಆದರೆ ಒಳಮನಸ್ಸಿನಲ್ಲೂ ಕೋಪಿಸಿಕೊಳ್ಳುವ ಸಂದರ್ಭ ಹೊರನಾಡಿನಲ್ಲಿ ಬರುವುದೇ ಇಲ್ಲ ಎಂಬುದೇ ಆ ಕ್ಷೇತ್ರದ ಅನನ್ಯತೆಗೆ ಸಾಕ್ಷಿ. ಯಾವುದೇ ಒಂದು ಕ್ಷೇತ್ರಕ್ಕೆ ಅದರದೇ ಆದ ಶಕ್ತಿ ಇದ್ದೇ ಇರುತ್ತದೆ.

ಆ ವಿಚಾರದಲ್ಲಿ ಸಂಶಯವೇ ಇಲ್ಲ. ಆದರೆ ಆ ಅಸಾಮಾನ್ಯ ಅಗೋಚರಶಕ್ತಿಯ ಅನುಭವವನ್ನು ಸಾಮಾನ್ಯರಾದ ನಾವು ನಮ್ಮೊಳಗೆ ಇಳಿಸಿಕೊಳ್ಳಲು ನಮ್ಮ ಚಿತ್ತ ಚಿನ್ಮಯವಾಗಿ ಪ್ರಸನ್ನಗೊಂಡಿರಬೇಕಾಗುತ್ತದೆ.ಚಿತ್ತ ಪ್ರಸನ್ನವಾಗಿರಲು ಕ್ಷೇತ್ರದ ಸುತ್ತಲಿನ ವಾತಾವರಣವೂ ಅದಕ್ಕೆ ಪೂರಕವಾಗಿರಬೇಕಾಗುತ್ತದೆ.”ತೀರ್ಥವನ್ನು ಎಲ್ಲಿ ಕೊಡುತ್ತಾರೆ?”ಎಂದು ಕೇಳಿದರೆ ಅರ್ಥವಿಲ್ಲದಂತೆ ಅರ್ಚಕನೊಬ್ಬ ಸಿಡುಕಿದರೆ ಆಗಷ್ಟೇ ದರ್ಶನದಿಂದಾದ ಆನಂದಾನುಭವ ನಿರಂತರವಾಗದೆ ಕ್ಷಣಮಾತ್ರದಲ್ಲಿ ಮನಸ್ಸು ಕಲಕಿಬಿಡುತ್ತದೆ. ತನುಮನದಲ್ಲಿ ಆಗ ತಾನೇ ಅರಳಿದ ಭಕ್ತಿಯೆಂಬ ಹೂವನ್ನು ಅಲ್ಲೇ ದೇವಾಲಯದ ಸಿಬ್ಬಂದಿವರ್ಗ ಹೊಸಕಿ ಬಿಡುತ್ತಾರೆ.

ಒಳಗೆ ದೇವರಿಗೆ ಮಂಗಳಾರತಿ ಮಾಡುವ ಅರ್ಚಕ ಹೊರಗೆ ಭಕ್ತಾದಿಗಳಿಗೂ ಮಂಗಳಾರತಿ ಮಾಡುವುದು ತನ್ನದೇ ಕೆಲಸವೆಂದು ಭಾವಿಸಿಬಿಟ್ಟಿರುತ್ತಾನೆ. ದರ್ಶನಮಾತ್ರದಿಂದ ನಮ್ಮ ಆಂತರ್ಯದಲ್ಲಿ ಹಚ್ಚಿಸಿಕೊಂಡ ಆಧ್ಯಾತ್ಮದ ದೀಪವನ್ನು ಆರಿಸಿ ಅರ್ಚಕನ ಸಹಾಯಕ ಕಿಚ್ಚನ್ನು ಹಚ್ಚಿಬಿಡುತ್ತಾನೆ.ಇಂತಹ ಅನಾರೋಗ್ಯಕರ,ಅಹಿತಕರ ಘಟನೆಗಳಿಂದ ಭಕ್ತಾದಿಗಳಿಗೆ ಬೇಸರವಾಗಬಾರದೆಂದು ಹೊರನಾಡಿನ ಧರ್ಮದರ್ಶಿಗಳು ಸಿಬ್ಬಂದಿವರ್ಗದವರಿಗೂ ಒಂದು ಶಿಸ್ತು, ನೀತಿಸಂಹಿತೆಯನ್ನು ಜಾರಿಗೆ ತಂದಿದ್ದಾರೆ.ಭಕ್ತರನ್ನು ಹೇಗೆ ಪ್ರೀತಿಯಿಂದ ಉಪಚರಿಸಬೇಕೆಂಬ ಸಾಮಾನ್ಯಸಂಸ್ಕಾರವನ್ನು ಸಿಬ್ಬಂದಿಗಳಿಗೆ ಪ್ರೀತಿಯಿಂದ ಹೇಳಿಕೊಟ್ಟಿದ್ದಾರೆ. ಅಂತೆಯೇ ಅವರೆಲ್ಲ ಇದನ್ನು ಪಾಲಿಸುತ್ತಾ ಧರ್ಮದರ್ಶಿಗಳ ಅಣತಿಯಂತೆ ಕ್ಷೇತ್ರದಲ್ಲಿ ಒಂದು ಹಿತಕರವಾದ ಆಧ್ಯಾತ್ಮಿಕ ವಾತಾವರಣವನ್ನು ನಿರ್ಮಿಸಿದ್ದಾರೆ.

“ಅನ್ನಪೂರ್ಣೇಶರಿ ಅನ್ನದಾಯಿನಿ”ಎಂಬ ಮಾತಿಗೆ ಅನ್ವರ್ಥವಾಗಿ ಹಗಲು-ರಾತ್ರಿ ದಿನದ 24 ಗಂಟೆಗಳ ಕಾಲವೂ ಹಸಿದವರ ಹಸಿವ ನೀಗಿಸಲು ಅನ್ನದಾಸೋಹ ನಡೆಯುತ್ತಿದೆ.”ನಿಮ್ಮದು ಊಟ ಆಯಿತಾ?…ಬನ್ನಿ ಊಟ ಮಾಡಿ”ಎಂದು ಸಿಬ್ಬಂದಿಯವರೇ ಊಟಕ್ಕೆ ಕರೆದುಕೊಂಡುಹೋಗಿ ಅನ್ನವನಿಕ್ಕುವ ಪದ್ಧತಿ ಈ ನಾಡಿನಲ್ಲಿ ಪ್ರಾಯಶಃ ಅನ್ನಪೂರ್ಣೇಶ್ವರಿಯ ಕ್ಷೇತ್ರ ಹೊರನಾಡಿನಲ್ಲಿ ಮಾತ್ರ.

“ಅದೇನು ಮಹಾ ಬಿಡಿ ದೇವಾಲಯಕ್ಕೆ ಉತ್ತಮ ಆದಾಯವಿದೆ ಮಾಡುತ್ತಿದ್ದಾರೆ” ಎಂದು ನೀವು ಸುಲಭವಾಗಿ ಹೇಳಬಹುದು ಆದರೆ ಅನ್ನಪ್ರಸಾದವನ್ನು ವ್ಯವಸ್ಥಿತವಾಗಿ ಭಕ್ತಕೋಟಿಗೆ ನಿತ್ಯ ಸಮರ್ಪಣೆ ಮಾಡುವುದಕ್ಕೂ ಆಡಳಿತವರ್ಗಕ್ಕೆ ಒಂದು ಒಳ್ಳೆಯ ಮನಸ್ಸಿರಬೇಕು.ಮನಸ್ಸಿಟ್ಟು ಆ ಕಾರ್ಯವನ್ನು ಲೋಪವಿಲ್ಲದಂತೆ ಮುನ್ನಡೆಸುವ ಆ ಮಹಾಯಜ್ನದಲ್ಲಿ ಅವರೂ ಭಾಗಿಗಳಾಗಬೇಕು.

ಅದನ್ನು ನೀವು ಹೊರನಾಡಿನಲ್ಲಿ ಕಣ್ಣಾರೆ ನೋಡಬಹುದು.ಏಕೆಂದರೆ ರಾಜ್ಯದ ಮೂಲೆಮೂಲೆಯಿಂದ ಬರುವ ಭಕ್ತಾದಿಗಳಿಂದ ಅಪಾರ ಆದಾಯವಿದ್ದೂ ಶಕ್ತಿಕ್ಷೇತ್ರವೊಂದರಲ್ಲಿ ಇಂದಿಗೂ ಮಧ್ಯಾಹ್ನ ಒಂದು ಹೊತ್ತು ಕೂಡ ಪ್ರಸಾದಭೋಜನದ ವ್ಯವಸ್ಥೆ ಮಾಡದಿರುವುದು ಭಕ್ತರ ಬಗ್ಗೆ ಆ ಕ್ಷೇತ್ರದ ಆಡಳಿತಮಂಡಳಿಗೆ ಇರುವ ನಿರ್ಲ್ಯಕ್ಷ್ಯತನವನ್ನು ತೋರಿಸುತ್ತಿದೆ. ದೇವಾಲಯದ ಎದುರಿನಲ್ಲೇ ಇರುವ ತನ್ನ ಸಂಬಂಧಿಯ ಹೋಟೆಲ್ ಲಾಭಗಳಿಸಲಿ, ಆ ಮೂಲಕ ಹಣ ಮಾಡೋಣ, ಎಂಬ ಆಡಳಿತ ಮಂಡಳಿಯ ಅರ್ಚಕರ ವಿಪರೀತ ಹಣದ ದಾಹಕ್ಕೆ ಏನನ್ನಬೇಕು?ಅವರ ಅರ್ಥಕಳೆದುಕೊಂಡ ಸ್ವಾರ್ಥಭರಿತ ಆರ್ಥಿಕ ಮನೋಭಾವಕ್ಕೆ ಆ ದೇವಿಯೇ ಮತಿ ನೀಡಬೇಕು.

ಇದೇನು ವಿಷಯಾಂತರವಾಯಿತಲ್ಲ ಅನ್ನ ಬೇಡಿ, ಭಕ್ತರ ಸಂಖ್ಯೆ ಅಧಿಕವಿದ್ದೆಡೆಯೆಲ್ಲಾ ಕ್ಷೇತ್ರದ ಅಭಿವೃದ್ಧಿ ಅಧಿಕವಾಗಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿಯೆಂಬುದು ಮೇಲಿನ ಒಂದು ಉದಾಹರಣೆಯಿಂದ ಸಾಬೀತಾದಂತಾಯಿತು. ಅಂದಹಾಗೆ ನೀವೆಲ್ಲಾ ಒಮ್ಮೆ ಹೊರನಾಡಿಗೆ ಹೋಗಿಬನ್ನಿ. ಇನ್ನೂ ಹೆಚ್ಚಿನ ಅಭಿವೃದ್ಧಿಗೆ ಸಲಹೆ ಕೊಡಬೇಕೆನಿಸಿದರೆ ನೇರವಾಗಿ ಧರ್ಮದರ್ಶಿಗಳನ್ನು ಭೇಟಿಮಾಡಿ. ಅಹಂಕಾರವಿಲ್ಲದ, ಗಾಂಭೀರ್ಯಪೂರ್ಣ ವ್ಯಕ್ತಿತ್ವದ ಶ್ರೀ ಭೀಮೇಶ್ವರ ಜೋಶಿ ಅವರಿಗೆ ಒಳ್ಳೆಯ ಸಲಹೆಸೂಚನೆಗಳನ್ನು ಸದಾ ಸ್ವಾಗತಿಸುವ ಔದಾರ್ಯಮನೋಭಾವವಿದೆ. ಹಾಗು ಅವರ ಈ ಮನೋಭಾವವೇ ಕ್ಷೇತ್ರದ ಇಂದಿನ ಔನ್ನತ್ಯಕ್ಕೆ ಕಾರಣವಾಗಿದೆ. ಅನ್ನಪೂರ್ಣೆ ಅವರ ಸಂಪೂರ್ಣಸೇವೆಯನ್ನು ಇನ್ನೂ ನೂರಾರು ಕಾಲ ಸ್ವೀಕರಿಸಲಿ ಎಂಬುದೇ ಭಕ್ತರ ಆಶಯ.

source : one India Kannada