Adhishakthyathmaka Sri Annapoorneshwari Ammanavara Temple, SriKshetra Horanadu - 577 181, Chickmagalore

 

ಕರುನಾಡ ‘ಅನ್ನ-ಜ್ಞಾನ’ ಸಂಸ್ಕೃತಿಯ ಸಿರಿ, ಹೊರನಾಡ ಅನ್ನಪೂರ್ಣೇಶ್ವರಿ

ಶ್ರೀ ಮತ್ಸರ್ವಜನೇಶ್ವರೀ ಸುಖಕರೀ ಮಾತಾಕೃಪಾಸಾಗರೀ।
ಶ್ರೀ ಚಕ್ರಾತ್ಮಕ ದಿವ್ಯ ವೈಭವಪುರೀ ಸಾಮ್ರಾಜ್ಯ ಮಾಹೇಶ್ವರೀ।।
ಶ್ರೀ ಪಾದಾನತ ಭಕ್ತ ಪಾವನಕರೀ ನಿತ್ಯಾನ್ನದಾನೇಶ್ವರೀ।
ಶ್ರೀ ವಿದ್ಯಾದಿಭಿರರ್ಚಿತಾ ಶುಭಕರೀ ಪಾಯಾತ್‌ ಸುರಾಧೀಶ್ವರೀ।।

ಕಣ್ಣು ತುಂಬುವ ನಿಚ್ಚಂ ಪೊಸತೆನಿಸುವ ಸಸ್ಯ ಶ್ಯಾಮಲೆ. ಜಲಲ ಜಲಧಾರೆ. ಅನಂತ ಪ್ರಕೃತಿಯ ಅನನ್ಯತೆಗೆ ಸಾಕ್ಷಿಯೆಂಬಂತೆ ತೋರುವ ಕಣಿವೆ ಕಂದರ ಘಟ್ಟಗಳು. ತೇಲಿ ಅಲೆಯಾಗುವ ಹಕ್ಕಿಗಳಿಂಚರ. ಕಾಫಿ-ಚಹಾ ತೋಟಗಳಿಂದ ತೇಲಿಬರುವ ತಂಗಾಳಿಯ ಘಮಲು. ಈ ಪರಿಯ ಪರಿಸರದ ನಡುವೆ ಆದಿ ಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ದೇವಿಯ ನೆಲೆ. ಅದು ಹೊರನಾಡು!

ದಾರಿ ದುರ್ಗಮ ಎಂತಲೋ, ನಾಡಿಂದ ದೂರವಾಗಿ ಕಾಡಿನ ನಡುವೆ ಇರುವುದರಿಂದಲೋ ಏನೋ ಅನ್ನಪೂಣೇಶ್ವರಿ ನೆಲೆ ‘ಹೊರನಾಡು’ ಎಂದು ಪ್ರಸಿದ್ಧವಾಗಿದೆ. ನಾಡಿನ ಪುಣ್ಯಕ್ಷೇತ್ರಗಳಲ್ಲೊಂದಾದರೂ, ನಾಡು ಹೊರಗಿನದು ಆದುದರಿಂದಲೇ ಇರಬೇಕು- ಅನ್ನಪೂರ್ಣೇಶ್ವರಿ ನೆಲೆ ಮಂಜುನಾಥನ ಧರ್ಮಸ್ಥಳದಂತಾಗಲೀ, ಕೃಷ್ಣನ ಉಡುಪಿಯಂತಾಗಲೀ, ಮೂಕಾಂಬಿಕೆಯ ಕೊಲ್ಲೂರಿನಂತಾಗಲೀ, ಅಥವಾ ಶಾರದೆ ಶೃಂಗೇರಿಯಂತಾಗಲೀ- ಪ್ರಭಾವಳಿಯ ಮೊದಲ ಸಾಲಿನಲ್ಲಿಲ್ಲ . ಹಾಗೆ ನೋಡಿದರೆ ಹೊರನಾಡಿನ ಚೆಲುವು ಇತರ ಪುಣ್ಯಕ್ಷೇತ್ರಗಳಿಗಿಲ್ಲ . ಇಲ್ಲಿನ ನಿಸರ್ಗ ಉಳಿದೆಡೆಗಳಲ್ಲಿ ಕಾಣ ಸಿಗುವುದಿಲ್ಲ . ಅಚ್ಚುಕಟ್ಟಲ್ಲೂ ಹೊರನಾಡು ಎತ್ತಿದ ಕೈ.

ದೂರದ ಗರ್ಭಗುಡಿಯ ನಂದಾದೀಪದ ಬೆಳಕಿನಲ್ಲಿ ದರ್ಶನ ಕೊಡುವ ಇತರ ದೇವಿಯರಂತಲ್ಲ ಹೊರನಾಡ ಅನ್ನಪೂರ್ಣೇಶ್ವರಿ. ತೀರಾ ಹತ್ತಿರದಿಂದ ದೇವಿಯ ದರ್ಶನ ಲಭ್ಯ. ಆರು ಅಡಿ ಎತ್ತರದ ದೇವಿಯ ಶಿಲಾಮೂರ್ತಿ ಪ್ರತಿಷ್ಠಾಪನೆಯಾದದ್ದು 1973 ರಲ್ಲಿ . ತಮಿಳುನಾಡಿನ ಶಂಕೋಟೆಯಿಂದ ತಂದು ಸ್ಥಾಪಿಸಲಾಯಿತು. ಮೂರ್ತಿಯ ಕೆಳಭಾಗದಲ್ಲಿ ಮೂಲದೇವಿಯಿದ್ದಾಳೆ. ಅನ್ನಪೂರ್ಣೆ ಚತುರ್ಭುಜೆ. ಮೇಲಿನ ಎರಡೂ ಕೈಗಳಲ್ಲಿ ಶಂಖಚಕ್ರ, ಇನ್ನೊಂದು ಕೈಯಲ್ಲಿ ಶ್ರೀಚಕ್ರ, ನಾಲ್ಕನೇ ಕೈಯಲ್ಲಿ ಗಾಯತ್ರಿ.

ಹೊರನಾಡಿಗೆ ಏಕೆ ಹೋಗಬೇಕು?
ಯಾತ್ರಾಸ್ಥಳಗಳಿಗೆ ಹೋಗುವುದಾದರೂ ಏಕೆ ; ದೇವರ ದರುಶನಕೆ, ಭಕುತಿಯ ಪ್ರದರ್ಶನಕೆ. ಹೊರನಾಡಿನಲ್ಲಿ ಇನ್ನೊಂದು ಲಾಭವಿದೆ. ನಿಸರ್ಗ ಮೈ ಮುರಿದು ಬಿದ್ದಿರುವ ಅಲ್ಲಿ ನಾವು ಹಗುರಾಗಬಹುದು. ಯಂತ್ರಗಳ ನಡುವೆ ಕಿಲುಬುಗಟ್ಟಿದ ಮನಸ್ಸು ಹಗುರಾಗಲು ಹೊರನಾಡು ಸಂಜೀವಿನಿ. ಮಳೆಯ ದಿನಗಳಲ್ಲಾದರೆ ಕಣ್ಣಿಗೆ ಹಸಿರು ತುಂಬಿಕೊಳ್ಳುತ್ತ , ನೀರಿನ ಬಳುಕ ಕಿಂಕಿಣಿ-ಹಕ್ಕಿಗಳಿಂಚರಕೆ ಕಿವಿಯಾಡ್ಡಬಹುದು. ಘಟ್ಟಗಳಿಗೆ ಕಣ್ಣು ಕೀಲಿಸಿ ಕಲ್ಪನಾ ಲಹರಿ ಹರಿಬಿಡಬಹುದು.

ಬೆಂಗಳೂರಿನಿಂದ ಹೊರನಾಡು 330 ಕಿಮೀ ದೂರ. ಶೃಂಗೇರಿಯಿಂದಾದರೆ 75 ಕಿಮೀ. ಚಿಕ್ಕಮಗಳೂರಿನಿಂದ ಬರೋಬ್ಬರಿ 100 ಕಿಮೀ. ರೈಲು ಸಂಪರ್ಕವಿಲ್ಲ . ಬಸ್ಸಲ್ಲೇ ಹಾದಿ ಸವೆಸಬೇಕು. ಉಳಿದುಕೊಳ್ಳಲು, ಉಣಲು ದೇವಸ್ಥಾನದ ಆಡಳಿತ ಮಂಡಳಿ ಅಚ್ಚುಕಟ್ಟಿನ ವ್ಯವಸ್ಥೆ ಮಾಡಿದೆ. ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ತುತ್ತು ಹೆಚ್ಚೇ ಸೇರುತ್ತದೆ. ಊಟ, ವಸತಿ ಉಚಿತ ; ಹೊರನಾಡಿನಲ್ಲಿ ಭಕ್ತಿಯ ಹೆಸರಿನಲ್ಲಿ ಸುಲಿಗೆಗೆ ಅವಕಾಶವೇ ಇಲ್ಲ .

ಬೆಳಗ್ಗೆ ಏಳರಿಂದ ರಾತ್ರಿ ಒಂಭತ್ತರವರೆಗೂ ದೇವಿಯ ದರುಶನ ಭಾಗ್ಯ ಲಭ್ಯ. ದಿನಕ್ಕೆ ಮೂರು ಸಲ ಮಹಾ ಮಂಗಳಾರತಿ. ಮಾತಾನ್ನಪೂರ್ಣೇಶ್ವರಿಯ ಅನ್ನಪೂರ್ಣ ಸದನ

ಊಟ ಇಲ್ಲಿ ಕಾಟಾಚಾರದ ಅವಸರದ್ದಲ್ಲ ; ಪ್ರೀತಿಯ ಉಪಚಾರದ್ದು . ರುಚಿಕಟ್ಟು ಹಾಗೂ ಸ್ವಾದಿಷ್ಟ . ಅವಲಕ್ಕಿ, ಮಜ್ಜಿಗೆ, ಕಾಫಿ ಬೆಳಗಿನ ಉಪಾಹಾರಕ್ಕಾದರೆ, ಮಧ್ಯಾಹ್ನದ ಭೋಜನಕ್ಕೆ ಅನ್ನ, ಸಾರು, ಚಿತ್ರಾನ್ನ ಹಾಗೂ ಪಾಯಸ. ಊಟದ ಕೊನೆಗೆ ಹೊಟ್ಟೆ ತಂಪೆನಿಸಲು ಮಜ್ಜಿಗೆ. ರಾತ್ರಿಯೂ ಸ್ವಾದಿಷ್ಟ ಭೋಜನ. ಅಡುಗೆ ಕೋಣೆ ಆಧುನಿಕ ಸೌಲಭ್ಯಗಳಿಂದ ಸಜ್ಜುಗೊಂಡಿದೆ.

ಮಲೆನಾಡಿನ ಜನಕ್ಕೆ ಅನ್ನಪೂರ್ಣೇಶ್ವರಿ ಕಾಯುವ ದೇವತೆ. ಸುಖ, ದುಃಖ ಎಲ್ಲವೂ ಅವಳಿಗೇ ಸೇರಿದ್ದು . ಆ ಕಾರಣದಿಂದಲೇ ಮೊದಲ ಕೊಯ್ಲನ್ನು ದೇವಿಗೆ ಅರ್ಪಿಸುತ್ತಾರೆ. ಭತ್ತ, ಅಡಿಕೆ, ಕಾಫಿ, ಟೀ.. ದೇವಿಯ ಸನ್ನಿಧಿಗೆ ಬಂದ ನಂತರವೇ ಮಾರುಕಟ್ಟೆಗೆ- ಮನೆ ಮಂದಿಗೆ.

ಹೊರನಾಡನ್ನು ದಕ್ಷಿಣ ಕಾಶಿ ಎಂತಲೂ ಕರೆಯುತ್ತಾರೆ. ದೇವಿಯ ಬಗ್ಗೆ ಹಲವಾರು ಐತಿಹ್ಯಗಳಿದ್ದರೂ, ಈವರೆಗೂ ಇತಿಹಾಸದ ಬಗ್ಗೆ ಅಧಿಕೃತ ಉಲ್ಲೇಖಗಳು ಹೆಚ್ಚಿನ ಸಂಖ್ಯೆಯಲ್ಲಿ ದೊರಕಿಲ್ಲ . ಅನ್ನಪೂರ್ಣೇಶ್ವರಿ ಹೊರನಾಡಿನ ದೊಡ್ಡಮನೆ ಪಾಳೆಗಾರ ಮನೆತನದ ಪಟ್ಟದ ದೇವತೆ ಎಂತಲೂ ಹೇಳುತ್ತಾರೆ.

ಧರ್ಮದರ್ಶಿ ಭೀಮೇಶ್ವರ ಜೋಶಿ ಅವರ ನೇತೃತ್ವದಲ್ಲಿ ಹೊರನಾಡು ಸಮಾಜಮುಖಿಯಾಗಿಯೂ ಗುರ್ತಿಸಿಕೊಂಡಿದೆ. ಪ್ರತಿ ವರ್ಷ ಬಡ ಕುಟುಂಬದ ವಿದ್ಯಾರ್ಥಿಗಳನ್ನು ದತ್ತು ತೆಗೆದುಕೊಂಡು ಅವರ ಶಿಕ್ಷಣದ ಜವಾಬ್ದಾರಿಯನ್ನು ದೇಗುಲ ಹೊರುತ್ತದೆ. ಶಾಲೆಗಳ ವಿದ್ಯಾರ್ಥಿಗಳಿಗೆ ಅನ್ನದಾನ, ಸಪ್ತಪದಿ ಯೋಜನೆಯಡಿ ಪ್ರತಿವರ್ಷ ಉಚಿತ ವಿವಾಹ ದೇವಿಯ ಸನ್ನಿಧಿಯಲ್ಲಿ ನಡೆಯುತ್ತವೆ. ಧನ್ವಂತರಿ ಯೋಜನೆಯಡಿ ಬಡ ರೋಗಿಗಳಿಗೆ ದುಬಾರಿಯಾದ ಹೃದಯ ಶಸ್ತ್ರ ಚಿಕಿತ್ಸೆ, ಕಿಡ್ನಿ ಮರು ಜೋಡಣೆ ಮುಂತಾದ ಕಾಯಿಲೆಗಳ ಚಿಕಿತ್ಸೆಗೆ ಆರ್ಥಿಕ ನೆರವು ನೀಡಲಾಗುವುದು.

ನೀವು ಹೊರನಾಡಿಗೆ ಹೋಗುತ್ತೀರಾ? ದೇವಿಗೆ ವಿಶೇಷ ಪೂಜಾ ಕಾರ್ಯ ನಡೆಸಬೇಕಾ? ಸಂಪರ್ಕಿಸಿ-
ಜಿ.ಭೀಮೇಶ್ವರ ಜೋಶಿ, ಧರ್ಮಕರ್ತರು, ಆದಿ ಶಕ್ತ್ಯಾ ತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ದೇವಸ್ಥಾನ, ಹೊರನಾಡು- 577181. ಚಿಕ್ಕಮಗಳೂರು ಜಿಲ್ಲೆ.

News from http://thatskannada.oneindia.in/news/2002/03/17/horanadu.html